June 23, 2021

ಅವಳಿಟ್ಟ ಉಡುಗೊರೆ --ಗುಟುಕು ಉಸಿರು ಇರುವ ತನಕ

 ಅವಳಿಟ್ಟ ಉಡುಗೊರೆ --ಗುಟುಕು ಉಸಿರು ಇರುವ ತನಕ

{ಒಂದು ಸ್ನೇಹಕ್ಕೆ,ಪ್ರೀತಿಗೆ,ಬೆಚ್ಚನೆಯ ಅನುರಾಗಕ್ಕೆ ಉಡುಗೊರೆ ಬೇಕಾ?ಹುಂ ಬೇಡವೆನ್ನಿಸುತ್ತದೆ. ಅದರೂ ಕೊಟ್ಟ ಉಡುಗೊರೆ ಬದುಕಿನ ಉಸಿರು ನಿಲ್ಲುವ ತನಕ ಇರ್ಬೇಕು, ಅಂತಹ ಉಡುಗೊರೆ ಯಾವುದು ಗೊತ್ತ? ಅಂತಹ ಉಡುಗೊರೆ ಪಡೆದ ಬದುಕಿನ ಕ್ಷಣವನ್ನು ನಾನು ಇಲ್ಲಿ ನೀಡಿದ್ದೀನಿ ಓದಿ}

ಬ್ಯೂಟಿಪುಲ್

ಮಧುರವಾದ ಬೆಚ್ಚನೆಯ ಸ್ನೇಹ ಅದು. ಅವಳು ನಕ್ಕರೆ ಸಾಕು ಹೃದಯದ ತುಂಬೆಲ್ಲ ಚೆಲುವಿನ ಕನಸುಗಳು ಚೆಲ್ಲಾಡುತ್ತಿದ್ದವು. ಹೂವಿನ ಎಳಸಿನ ಸಂಭ್ರಮದ ಕನಸನ್ನು ಪೋಣಿಸಿ ಕೊಂಡ ಮನಸ್ಸು ಪುಲಕಿತಗೊಳ್ಳುತ್ತಿತ್ತು. ಸ್ನೇಹ,ಪ್ರೀತಿ ಪರಸ್ಪರ ಸಂಬಂಧಗಳನ್ನು ಗೌರವಿಸಿ ಕೊಳ್ಳುವ ಪೂಜಿಸಿ ಕೊಳ್ಳುವ ಪರಿ ಅವಸ್ಥೆ ಇದು.

ಸಾಗರದ ಜ್ಯೂನೀಯರ್ ಕಾಲೇಜಿನಲ್ಲಿ ಓದ್ತಾ ಇದ್ದ ನನ್ಗೆ ಅಲ್ಲಿಯ ಸಾಹಿತ್ಯ ವಾತಾವರಣ ಬರೆಯುವುದಕ್ಕೆ ಚೇತನ ತುಂಬುತ್ತಿತ್ತು. ನಾ.ಡಿಸೋಜ,ಮಹಾಬಲೇಶ್ವರ ಭಟ್ಟ,ಕೆ.ವಿ.ಸುಬ್ಬಣ್ಣ,ಟಿ.ಪಿ. ಆಶೋಕ್ ಹೀಗೆ ಘಟಾನುಘಟಿಗಳ ಬರಹ ಮತ್ತು ಚಿಂತನೆಗಳು ನಮ್ಗೆ ಪ್ರೇರಣೆಯನ್ನು ಧಾರಣೆ ಮಾಡುತ್ತಿದ್ದವು. ಅವರೆಲ್ಲನ್ನೂ ನೆನದ ಕೂಡಲೇ ಬರೆಯುವ ಪೆನ್ನು ಎಚ್ಚರವಾಗುತ್ತಿತ್ತು. ಬದುಕಿನ ಅನಂತೆಯನ್ನು ಕಂಡು ಕಾಣಿಸುವ ಬರಹಗಾರರಿಕೆಗೆ ಮನಸ್ಸು ತುಡಿಯುತ್ತಿತ್ತು.

ಪ್ರಥಮ ಪಿ.ಯು.ಸಿ.ಓದ್ತಾ ಇದ್ದ ನಾನು ಕಾಲೇಜು ಮುಗಿಸಿಕೊಂಡು ಕೆಲಸಕ್ಕೆ ಹೋಗುತ್ತಿದ್ದೆ. ಸಾಗರ ಮುದ್ರಣ ಎನ್ನುವ ಪ್ರಿಟಿಂಗ್ ಪ್ರೇಸ್ ನಲ್ಲಿ ಕೆಲಸ. ಮೊಳೆ ಜೋಡಿಸಿವು ವಿಭಾಗದಲ್ಲಿ ಕನ್ನಡವನ್ನು ಜೋಡಿಸುತ್ತಿದ್ದೆ. ಮಧ್ಯಾಹ್ನದಿಂದ ಸಂಜೆ ಎಂಟು ಘಂಟೆಯ ತನಕ ದುಡಿಮೆ. ಕಾಲೇಜು ಮುಗಿಸಿಕೊಂಡು ಬರುವಾಗ ಗೆಳೆಯ ರಾಜಾರಾಂ ಪೈ ವಾಚ್ ರಿಪೇರಿ ಅಂಗಡಿಯಲ್ಲಿ ಕೂತು ಒಂದಿಷ್ಟು ಹರಟೆ ಹೊಡೆದು ಬರುತ್ತಿದ್ದೆ. ಅದು ಐದಾರು ಜನರ ನಮ್ಮ ಅಡ್ಡೆಯಾಗಿತ್ತು.

ಹೊಸ ಪುಸ್ತಕಗಳು,ಹೊಸ ಸಿನಿಮಾಗಳು,ನಾಟಕಗಳು,ಬ್ಯೂಟಿಪುಲ್ ಹುಡ್ಗಿಯರು ಅಬ್ಬಾ ಹೀಗೆ ಎಲ್ಲವನ್ನು ಚಕ್ಕಲುಬಕ್ಕಲು ಹಾಕ್ಕೊಂಡು ಕೂತು ಚರ್ಚೆ ಮಾಡುತ್ತಿದ್ದೇವಿ.ಹೀಗೆ ಹರಟೆ ಕೊಚ್ಚುವಾಗ ಜಾತಿ ವ್ಯವಸ್ಥೆಯ ಬಗ್ಗೆ ದೊಡ್ಡದಾಗಿಯೇ ಚರ್ಚೆ ಅಯ್ತು. ವಿದ್ಯಾವಂತರು ಹೇಗೆ ಅದನ್ನು ತಮ್ಮೋಳಗೆ ಸಾಕಿ ಕೊಂಡಿರುತ್ತಾರೆ ಎನ್ನುವುದ ಕುರಿತು ಗಂಭೀರವಾದ ಚರ್ಚೆಯನ್ನು ಅವತ್ತು ಒಂದು ದಿನ ಮಾಡಿದ್ದೀವಿ. ಅಂದಿನ ಚರ್ಚೆ ಇಟ್ಟುಕೊಂಡು ದ್ವಂದ್ವ ಎನ್ನುವ ಕಥೆಯನ್ನು ನಾನು ಬರೆದೆ. 

ಪ್ರೇಸ್ ಗೆ ತುಸು ಬೇಗ ಬರಲು ಹೇಳಿದ್ದ ಕಾರಣ ಗೆಳೆತಿ ವೀಣಾ ಬಾಯಿ ಕೈಯಲ್ಲಿ ಗುಬ್ಬಿ ಕಾಲು ಕಾಗೆ ಕಾಲು ಲಿಪಿಗಳಿದ್ದ ಹಾಳೆಯನ್ನು ಕೊಟ್ಟು ಟೈಪ್ ಮಾಡಿ ಕೊಡು ಅಂದೆ. "ಹೋಗೋ ನಂಗೆ ಬೇರೆ ಕೆಲ್ಸ" ಅಂದ್ಲು. "ಕಥೆ ಕಳುಹಿಸಬೇಕಾಗಿತ್ತು. ಸರಿ ಬಿಡು ನಾಳೆ ನಾನೇ ಮಾಡಿ ಕೊಳುತ್ತೀನಿ" ಎಂದೆ. "ನಿನ್ನ ಕಥೆನಾ ಕೊಡೊಪ್ಪ ನಾನು ಓದ್ಹಂಗೆ ಅಗುತ್ತೇ. ಟೈಪ್ ಮಾಡುತ್ತೀನಿ" ಅಂತ ಆಕೆ ತೆಗೆದ್ಕೊಂಡು ಹೋದ್ಲು. ಆಕೆಯ ನಗು,ಹೋಗೋ ಎಂದು ಹೇಳಿದ ಸೊಲ್ಲು ಅವತ್ತಿನ ಎಲ್ಲ ಕೆಲಸಕ್ಕೂ ಚೇತನ ತುಂಬಿತ್ತು. ಆಹ್ಹ ಹುಡುಗಿಯೊಬ್ಬಳ ಮಾತು, ನಗು,ಸ್ಪರ್ಶದಲ್ಲಿ ಎಂಥ ಶಕ್ತಿ ಇರುತ್ತೇ ಅಲ್ವಾ? ಅದೆಲ್ಲವನ್ನು ನಾನು ಅವತ್ತು ಅನುಭವಿಸಿದೆ. ಹೃದಯದ ತುಂಬೆಲ್ಲ ಅವಳದ್ದೆ ಘಲ್ ಘಲ್ ಸದ್ದು. 

ಮರು ದಿವ್ಸ ಕಾಲೇಜುನಲ್ಲಿ ಟೈಪ್ ಮಾಡಿದ ಕಥೆ ಕೊಟ್ಟಳು."ಚನ್ನಾಗಿ ಇದೆ ಕಾಣೋ.ಯಾವುದರೂ ಮ್ಯಾಗಜೀನ್ ಗೆ ಕಳುಹಿಸು" ಅಂದ್ಲು. ನೋಡೋಣ ಅಂತ್ಹೇಳಿ ಸೈಕಲ್ ಏರಿದೆ. ಸಿದ್ದು ಅಂದ್ಲು. ಅಬ್ಬಾ ಎಷ್ಟು ಚೆಂದ ಇತ್ತು ಅಂದರೂ ನನ್ನೋಳಗೆ ವೀಣೆಯ ತಂತಿಯನ್ನು ಮೀಟಿದ್ದಂತೆ ಅಗಿತ್ತು. ತುಂಬಾ ಮಧುರವಾದ ಧ್ವನಿ ಅದು. ಸಾಮಾನ್ಯವಾಗಿ ನನ್ನನ್ನು ಅವಳು ಮಾತ್ರ ಹೀಗೆ ಕರೆದ್ದಿದ್ದಳು. ಸುಮ್ಮನೆ ಇರುತ್ತ ಈ ಹಾಳು ಮನಸ್ಸು. ಸಂಭ್ರಮದಲ್ಲಿ ತೇಲಾಡಿತ್ತು. ಆಕೆಯನ್ನು ಪ್ರೀತಿಯಿಂದ ನೋಡಿದೆ. ನಕ್ಕೆ. ಅಷ್ಟು ಹೊತ್ತಿಗೆ ಆಕೆಯ ಗೆಳತಿ ಸವಿತ ಬಂದ್ಲು. ಈ ಟೈಮ್ಗೆ ಬರಬೇಕಾ ಈ ಮೂದೇವಿ ಅಂತ ಶಪಿಸ್ಕೊಂಡು ಮನೆ ದಾರಿ ಹಿಡಿದಿದ್ದೆ. ಈ ಕಥೆಯನ್ನು ಯಾವುದಕ್ಕೆ ಕಳುಹಿಸಲಿ ಅನ್ನುವ ಯೋಚನೆ ತಲೆಯಲ್ಲಿ ಗುಯ್ ಗುಡುತ್ತಿತ್ತು. 

ಬಹುಶಃ ಎರಡು ತಿಂಗಳು ಕಳೆದು ಹೋಗಿತ್ತು. ನನ್ನಲ್ಲಿ ಕಥೆ ಹಾಗೆ ಉಳಿಯಿತ್ತು. ಚನ್ನಾಗಿ ನೆನಪಿದೆ. ಬೆಳಿಗ್ಗೆ ಹತ್ತರ ಸಮಯ.  ಅವತ್ತು ಕನ್ನಡ ಪಿರೀಯಡ್ ಇರಲಿಲ್ಲ. ಲೈಬ್ರರಿಯತ್ತ ಹೆಜ್ಜೆ ಹಾಕುತ್ತಿದ್ದೆ. ವೀಣಾ ಬಾಯಿ ಅವಸರವಾಗಿ ಓಡಿ ಬಂದ್ಲು. "ಎಲ್ಲಿಗೋ?" ಅಂದ್ಲು. "ನಿಧಾನ ಯ್ಯಾಕೆ ಲೈಬ್ರರಿಗೆ ಹೋಗ್ರಾ ಇದ್ದೆ "ಎಂದು ನಿಂತ್ಕೊಂಡೆ. "ಅಯ್ಯೋ ಬಾರೋ ನಿನ್ನ ಹತ್ರ ಅರ್ಜೆಂಟ್ ಕೆಲ್ಸ ಇದೆ" ಎಂದು ಕೈ ಹಿಡಿದು ಎಳೆದಳು. 

ಸ್ಪರ್ಶ. ಮಧುರವಾದ ಸ್ಪರ್ಶ. ವಾಹ್ ಎಷ್ಟು ಚೆಂದ ಈ ಸ್ಪರ್ಶ.ಕರಗಿದೆ. ಪೂರ್ತಿ ಕರಗಿದೆ. ಅವಳನ್ನು ಹಿಂಬಾಲಿಸಿದೆ. ಕಾಲೇಜಿನ ಪಕ್ಕದಲ್ಲಿದ್ದ ಬಾವಿ ಬಳಿ ಕರೆದ್ಕೊಂಡು ಹೋದಳು. ಸಾಮಾನ್ಯವಾಗಿ ಹುಡ್ಗರು ಹುಡ್ಗರಿಯರು ಈ ಬಾವಿ ಕಟ್ಟೆ ಮೇಲೆ ಕೂರುವ ಅಭ್ಯಾಸ ಇತ್ತು. ಅಲ್ಲಿ ಹೋಗಿ ಇಬ್ಬರೂ ಕುಳಿತ್ತೇವು.

ಕೈಯಲ್ಲಿದ್ದ ಮಂಗಳವಾರಪತ್ರಿಕೆಯನ್ನು ನನ್ನ ಕೈಗೆ ಕೊಟ್ಟು "ನನ್ನ ಬೆಸ್ಟ್ ಪ್ರೆಂಡ್ ಕಥೆ ಬಂದಿದೆ. ನೋಡೋ" ಎಂದಳು.ವಾರಪತ್ರಿಕೆಯ ಪುಟಗಳನ್ನು ತಿರುವುತ್ತ "ಏನು ನಿನ್ನ ಪ್ರೆಂಡ್ ಹೆಸ್ರು"ಅಂದೆ. "ನೋಡಪ್ಪ ನಿಂಗೆ ಗೊತ್ತಾಗುತ್ತೆ. ಅವನ ಪರಿಚಯ ಇದೆ ನಿಂಗೆ" ಅಂದ್ಲು. ತುಸು ಅಸಮಾಧಾನ. ಇವಳಿಗೆ ಇನ್ನೊಬ್ಬ ಬೆಸ್ಟ್ ಪ್ರೆಂಡ್ ಇದ್ದಾನೆ ಎನ್ನುವ ಅಸೂಯೆಯಿಂದಲೇ ಪುಟಗಳನ್ನು ತಿರುವಿದೆ. ಅದರೆ ಮನಸ್ಸು ಮತ್ತು ಕಣ್ಣು ಪುಟಗಳನ್ನು ನೋಡಲೇ ಇಲ್ಲ. "ಯಾರದ್ದು ಇಲ್ಲ" ಅಂತ ವಾರ ಪತ್ರಿಕೆಯನ್ನು ಅಕೆಯ ಕೈಗೆ ಕೊಟ್ಟೆ. "ಹೇ ಸರಿಯಾಗಿ ನೋಡೋ" ಅಂತ ಮತ್ತೊಮ್ಮ ನನ್ನ ಕೈಗೆ ಇಟ್ಟಳು. "ಹೇ ಹೆಸ್ರು ಹೇಳು ಹುಡುಕಿ ಓದುತ್ತೀನಿ"

"ಸರಿಯಾಗಿ ನೋಡೋ ಕಥಾವಿಭಾಗ ನೋಡು ಸಾಕು" ಅಂತ ನನ್ನ ಕಡೆ ನೋಡಿದಳು. ಎರಡನೇಯ ಪುಟ. ಕಥೆಗಳ ಶೀರ್ಷಿಕೆ ನೋಡಿದೆ. ಮತ್ತೆ ಮತ್ತೆ ನೋಡಿದೆ. ಅರೆ ನನ್ನ ಕಥೆ ದ್ವಂದ್ವ ಪ್ರಕಟವಾಗಿದೆ. ಸಿ.ಎಸ್.ನಿರ್ವಾಣ ಸಿದ್ದಯ್ಯ ಅಂತ ಹೆಸರಿದೆ. ಅಚ್ಚರಿಗೊಂಡೆ. "ನಾನು ಕಳುಹಿಸಿಲ್ಲ ವೀಣಾ ಹೇಗೆ ಬಂತು?" ಅಂತ ಅಚ್ಚರಿ ವ್ಯಕ್ತಪಡಿಸಿದೆ. ಅಕೆ "ನಾನೇ ಕಳುಹಿಸಿದ್ದು"ಎಂದು ಹೇಳಿದಾಗ ಗೊತ್ತಿಲ್ಲದೇ ಕಣ್ಣಲ್ಲಿ ಹನಿಗಳು ತುಂಬಿದವು. ಅದೇನೋ ಸಂಭ್ರಮ ಹೇಳಲಿಕ್ಕೆ ಪದಗಳು ಇಲ್ಲ. ಆ ಅವರ್ಣನೀಯ ಅನಂದ ಬದುಕಿನಲ್ಲಿ ಮತ್ತೆ ಎಂದು ನೋಡಲಿಲ್ಲ.

ಅವತ್ತು ಇಬ್ಬರೂ ಕೈ ಕೈ ಹಿಡಿದು ಓಡಾಡಿದ್ದೀವಿ. ಟಾನು ಟಾನುಗಟ್ಟಲೇ ಮಾತನಾಡಿ ಕೊಂಡೇವಿ. ಕೈ ರೆಟ್ಟೆ ಮೇಲೆ ಒರಗಿ "ನನ್ನ ಸಿದ್ದು ಬಾಳು ಬಂಗಾರವಾಗ್ವೇಕು" ಪಿಸುಗುಟ್ಟಿ "ಇದು ನಾನು ನಿಂಗೆ ಕೊಟ್ಟ ಉಡುಗೊರೆ" ಅಂದ್ಲು. 

ಇಂದು ಆಕೆ ನನ್ನ ಜೊತೆ ಇಲ್ಲ. ಮದುವೆಯಾಗಿ ಮೂರು ಮುದ್ದಾದ ಮಕ್ಕಳನ್ನು ಹೆತ್ತಿದ್ದಾಳೆ. ಆದರೆ ಅವಳು ನನ್ನ ಬದುಕಿಗೆ ಕೊಟ್ಟ ಆ ಉಡುಗೊರೆ ಇಂದು ಮಾಸಿಲ್ಲ. ಗುಟುಕು ಜೀವ ಇರುವ ತನಕ ಇರುತ್ತೇ ಅಲ್ವಾ? ಇರಲೇ ಬೇಕು. ಇದ್ದಾಗ ಮಾತ್ರ ಬರವಣಿಗೆ ಕಾವು ಬರುತ್ತೆ. 

ಮೊದಲ ಕಥೆಗೆ ಬಂದ ಪತ್ರ




 


No comments:

Post a Comment

ಬೂತ್ ಮಟ್ಟದಲ್ಲಿ ಸಂಘಟನೆಗೆ ಕಾಂಗ್ರೇಸ್ ಗಾಂಧಿ ನಡೆ

ಸೋಲದೇವನಹಳ್ಳಿ ಗ್ರಾಮದಲ್ಲಿ ನಡೆದ ಗಾಂಧಿ ನಡೆ ಕಾರ್ಯಗಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಾತನಾಡಿದರು. ಹಿರಿಯ ಮುಖಂಡರಾದ ವೀರಪ್ಪಮೊ...