September 29, 2021

ಬೂತ್ ಮಟ್ಟದಲ್ಲಿ ಸಂಘಟನೆಗೆ ಕಾಂಗ್ರೇಸ್ ಗಾಂಧಿ ನಡೆ



ಸೋಲದೇವನಹಳ್ಳಿ ಗ್ರಾಮದಲ್ಲಿ ನಡೆದ ಗಾಂಧಿ ನಡೆ ಕಾರ್ಯಗಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಾತನಾಡಿದರು. ಹಿರಿಯ ಮುಖಂಡರಾದ ವೀರಪ್ಪಮೊಯಲಿ, ರಾಮಲಿಂಗರೆಡ್ಡಿ,ಯಲಹಂಕ ಮುಖಂಡರಾದ ಗೋಪಾಲಕೃಷ್ಣ,ಕೇಶವರಾಜಣ್ಣ ಇದ್ದರು. 

ಹೆಸರಘಟ್ಟ:-"ಬೂತ್ ಮಟ್ಟದಲ್ಲಿ ಸಮಸ್ಯೆಗಳನ್ನು ಅಲಿಸುವ ಪರಿಹಾರ ಕಂಡು ಕೊಳ್ಳುವ  ಕೆಲಸವಾಗಬೇಕು. ಮಹಿಳೆ ಸಮಸ್ಯೆಯ ಧ್ವನಿಯಾಗಿ ಕಾಂಗ್ರೇಸ್ ಕೆಲಸ ಮಾಡಬೇಕು. ಆ ದಿಸೆಯಲ್ಲಿ ಕಾರ್ಯಕ್ರಮವನ್ನು ರೂಪಿಸುತ್ತಿದ್ದು,ಕ್ರಿಯಾಶೀಲವಾಗಿ ಕೆಲಸ ಮಾಡಲು ಯುವ ಕಾರ್ಯಕರ್ತರು ಪಣ ತೊಡಬೇಕು" ಎಂದು ಕಾಂಗ್ರೇಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೇಸ್ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು. ಅವರು ಹೆಸರಘಟ್ಟ ಹೋಬಳಿ ಸೋಲದೇವನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಗಾಂಧಿ ನಡೆ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.
    "ಆಶಾ ಕಾರ್ಯಕರ್ತರು,ಮಹಿಳೆಯರಿಗೆ ಮೀಸಲಾತಿ ಇವುಗಳನ್ನು ತಂದ ಪಕ್ಷ ಕಾಂಗ್ರೇಸ್. ಇಂದು ಜನರು ನಮ್ಮ ಪರವಾಗಿ ಧ್ವನಿ ಎತ್ತಿ ಕೆಲಸ ಮಾಡುವ ಪಕ್ಷ ಅಧಿಕಾರದಲ್ಲಿ ಇರಬೇಕು ಎಂದು ಬಯಸುತ್ತಿದ್ದಾರೆ." ಎಂದು ಅವರು ತಿಳಿಸಿದರು.
    ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಶಾಸಕ ಕೃಷ್ಣಬೈರೇಗೌಡ ಅವರು ಮಾತನಾಡಿ "ಗಾಂಧಿ ಬಗ್ಗೆ ಮಾತನಾಡುವ ಅರ್ಹತೆಯನ್ನು ನಾವು ಕಳೆದು ಕೊಂಡಿದ್ದೀವಿ. ಕಾಂಗ್ರೇಸ್ ಈ ಹೊತ್ತಿನಲ್ಲಿ ಅಧಿಕಾರದಲ್ಲಿ ಇರಬೇಕಿತ್ತು. ಯ್ಯಾಕೆಂದರೆ ಬಿ.ಜೆ.ಪಿ. ಅಪಾಯಕಾರಿ ಮತ್ತು ಗಂಡಾಂತರ. ಬೆಲೆ ಏರಿಕೆಯಿಂದ ಜನ ಸಮಾನ್ಯರ ಬದುಕನ್ನು ಹಾಳುಗೆಡವಿದೆ. ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳಿಂದ ಜನರು ತತ್ತರಿಸಿ ಹೋಗಿದ್ದಾರೆ."ಎಂದು ಬೇಸಾರ ವ್ಯಕ್ತಪಡಿಸಿದರು.
    ವಿಧಾನಪರಿಷತ್ ಸದಸ್ಯ ಎಲ್.ಹನುಮಂತಪ್ಪ ಅವರು "ಗಾಂಧಿ ಜನ ಸೇವೆಯಲ್ಲಿ ದೇವರನ್ನು ಕಂಡರು. ಗಾಂಧಿ ತತ್ವಗಳು ಇಂದು ಹೆಚ್ಚು ಪ್ರಸ್ತುತ. ಈ ದೇಶದಲ್ಲಿ ಮಹಿಳೆ ಅತ್ಯುನತ್ತ ಸ್ಥಾನವನ್ನು ಏರಿದಾಗ ಮಾತ್ರ ಭಾರತ ಪೂರ್ಣವಾದ ಸ್ವಾತಂತ್ರ್ಯ ಲಭಿಸಿದೆ ಎಂದು ಅರ್ಥ."ಎಂದರು.
    ವಿಧಾನಪರಿಷತ್ ಸದಸ್ಯ ಎಂ.ನಾರಾಯಣ್ ಸ್ವಾಮಿ ಅವರು ಮಾತನಾಡಿ "ಶಿವರಾಮಕಾರಂತ ಬಡಾವಣೆಯ ಬಗ್ಗೆ ಮುಖ್ಯ ಮಂತ್ರಿಯ ಬಳಿ ಮಾತನಾಡಿದ್ದು,17 ಹಳ್ಳಿಗಳ ರೈತರ ಧ್ವನಿಯಾಗಿ ಕೆಲಸ ಮಾಡುತ್ತೇನೆ. ಈಗಾಗಲೇ ಸದನದಲ್ಲಿ ಪ್ರಶ್ನಿಸಿ ಉತ್ತರವನ್ನು ಪಡೆದಿದ್ದು,ಸಕಾಲದಲ್ಲಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ರೈತರಿಗೆ ಅನುಕೂಲವಾಗುವ ರೀತಿ ಕಾಂಗ್ರೇಸ್ ಕೆಲಸ ಮಾಡುತ್ತದೆ" ಎಂದು ಅವರು ಭರವಸೆ ನೀಡಿದರು.
     ಸಮಾರಂಭದಲ್ಲಿ ಯಲಹಂಕ ಕಾಂಗ್ರೇಸ್ ಮುಖಂಡ ಗೋಪಾಲಕೃಷ್ಣ, ಕೇಶವರಾಜಣ್ಣ,ಕಾಂಗ್ರೇಸ್ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್,ರಾಮಲಿಂಗರೆಡ್ಡಿ, ಹೆಸರಘಟ್ಟ ಮಹಿಳಾ ಬ್ಲಾಕ್ ಅಧ್ಯಕ್ಷರಾದ ಸಂಧ್ಯಾ, ಪಂಚಾಯಿತಿ ಸದಸ್ಯರಾದ ಚಾಂದ್ ಪಾಶ  ಅವರು ಭಾಗವಹಿಸಿದ್ದರು.

August 31, 2021

ರೈತರ ಕೈಗೆ ಒಂದಿಷ್ಟು ಅದಾಯ : ಒಂದೆಲಗ

 

 



ರೈತರ ಕೈಗೆ ಒಂದಿಷ್ಟು ಅದಾಯ :ಒಂದೆಲಗ

                                                                                  ಚಿತ್ರ ಲೇಖನ :-ಸಿ.ಎಸ್.ನಿರ್ವಾಣಸಿದ್ದಯ್ಯ

 ಬೆಂಗಳೂರಿನ ಹೆಸರಘಟ್ಟ ಗ್ರಾಮದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆಯು ಒಂದೆಲಗ ಸಸ್ಯದ ಅರ್ಕಾ ದಿವ್ಯ,ಮತ್ತು ಅರ್ಕಾ ಪ್ರಭಾವಿ ಎನ್ನುವ ಹೊಸ ತಳಿಗಳನ್ನು ಅವಿಷ್ಕಾರ ಮಾಡಿದೆ. ಅರ್ಕಾ ದಿವ್ಯ ಸಸ್ಯಹಾರವಾದ ತಳಿಯಾದರೆ,ಅರ್ಕಾ ಪ್ರಭಾವಿ ಔಷಧಿಯ ತಳಿಯಾಗಿದೆ. ದಕ್ಷಿಣ ಭಾರತದಲ್ಲಿರುವ ಸುಮಾರು 38 ಬಗೆಯ ತಳಿಗಳನ್ನು ಅಧ್ಯಾಯನ ಮಾಡಿ ಎರಡು ಹೊಸ ತಳಿಗಳನ್ನು ಸಂಸ್ಥೆಯ ವಿಜ್ಞಾನಿಗಳಾದ ಹಿಮಾಬಿಂಧು ಮತ್ತು ರೋಹಿಣಿ ಅವರು ಅವಿಷ್ಕಾರ ಮಾಡಿದ್ದಾರೆ.


 

    ಸಾಮಾನ್ಯವಾಗಿ ಒಂದೆಲಗ ಅಂದ ಕೂಡಲೇ  ಅದಾ ಇಲ್ಲೇ ನಮ್ಮನೆ ಬೇಲಿ ಸಂಧಿಯಲ್ಲಿ, ಕುರುಚಲು ಗಿಡಗಳ ಮಧ್ಯೆ ಬೆಳೆಯುತ್ತೆ.ಅದು ಔಷಧಿ ಗಿಡವಂತೆ ಬಿಡಿ ಅನ್ನುವ ತಿರಸ್ಕಾರ ಭಾವ ಅನೇಕರಲ್ಲಿದೆ. ಆದರೆ ಒಂದೆಲಗವು ರೈತರ ಬೊಗಸೆಗೆ ಒಂದಿಷ್ಟು ಅದಾಯವನ್ನು ತರುವ ಬೆಳೆಯಾಗಿದೆ. ಅಚ್ಚರಿ ಎನಿಸಿದರೂ ಇದು ಸತ್ಯ.

    ಒಂದೆಲಗ ಬೆಳೆಯನ್ನು ಆಹಾರ ಮತ್ತು ಅಯುರ್ವೇದ ಔಷಧಿ ತಯಾರಿಕೆಯಲ್ಲಿ ಬಳಸುತ್ತಿರುವುದರಿಂದ ಬೆಳೆಯು ತನ್ನದೇ ಆದ ಮಾರುಕಟ್ಟೆಯನ್ನು ಇಂದು ಕುದುರಿಸಿಕೊಂಡಿದೆ. ಹಾಗಾಗಿ ಬೆಳೆಯುವ ರೈತರ ಕೈಗೆ ಒಂದಿಷ್ಟು ಕಾಸನ್ನು ಇದು ತಂದು ಕೊಡಬಲ್ಲದು.



ಬೆಳೆಯುವ ವಿಧಾನ

ಎರಡು ವಿಧದ ಬೆಳೆಗಳನ್ನು ಬೆಳೆಯುವ ವಿಧಾನ ಒಂದೇ ಅಗಿರುತ್ತದೆ. ಮಳೆಗಾಲದಲ್ಲಿ ನಾಟಿ ಮಾಡುವುದು ಹೆಚ್ಚು ಸೂಕ್ತ.  ಸಾಮಾನ್ಯವಾಗಿ ಸಸಿಯನ್ನು ಅಡಿಕೆ ಮತ್ತು ತೆಂಗಿನಮರದ ಮಧ್ಯ ಸಾಲಿನಲ್ಲಿ ನೀರಸವಾಗಿ ಬೆಳೆಯಬಹುದು. ಇಲ್ಲವೇ ಮಣ್ಣಿನ ದಿಬ್ಬಗಳನ್ನು ಮಾಡಿ ಅದರ ಮೇಲೆ ನಾಟಿ ಮಾಡಬಹುದು.

ಗಿಡಕ್ಕೆ ಮಣ್ಣಿನಲ್ಲಿ ತೇವಾಂಶ ಮತ್ತು ಹೆಚ್ಚು ನೆರಳು ಇರುವ ಹಾಗೆ ಪೋಷಿಸ ಬೇಕು. ಪರದೆಗಳನ್ನು ಹಾಕಿ ಇಲ್ಲವೇ ಚಪ್ಪರವನ್ನು ಹಾಕಿ ಸಸಿಗಳಿಗೆ ನೆರಳು ಬೀಳುವ ವ್ಯವಸ್ಥೆ ಮಾಡಬೇಕಾಗುತ್ತದೆ. 90 ದಿನಗಳ ಬೆಳೆ ಇದಾಗಿದ್ದು, ನಂತರ ಪ್ರತಿ ತಿಂಗಳು ಎಲೆಗಳನ್ನು ಕೊಯ್ಯಬಹುದು. ಎಲೆಗಳನ್ನು ಕತ್ತರಿಸಿದ ಹಾಗೆ ಗಿಡವು ಸಮೃದ್ದಿಯಿಂದ ಬೆಳೆಯುತ್ತದೆ.



ಭಾದಿಸಿದ ರೋಗ

    ಮಳೆಗಾಲದಲ್ಲಿ ಬೆಳೆಗೆ ಫಂಗಸ್ ಎನ್ನುವ ರೋಗ ಬರುತ್ತದೆ. ಅದು ಬಿಟ್ಟರೆ ಯಾವುದೇ ಕೀಟವಾಗಲೀ,ರೋಗವಾಗಲೀ ಗಿಡವನ್ನು ಬಾಧಿಸುವುದಿಲ್ಲ. ಗಿಡವನ್ನು ಸರಾಗವಾಗಿ ಹೆಚ್ಚಿನ ಮುರ್ತುವರ್ಜಿ ಇಲ್ಲದೇ ಬೆಳೆಯ ಬಹುದು.

  ಒಂದು ಎಕರೆ ಒಂದೆಲಗ ಬೆಳೆಯಲು ನೂರು ಕೆ.ಜಿ.ಯಷ್ಟು ಸಸಿಗಳು ಬೇಕಾಗುತ್ತದೆ. ನೂರು ಕೆ.ಜಿ. ಬೆಳೆಯು ಸಾವಿರ ಕೆ.ಜಿ.ಯಷ್ಟು ಎಲೆಗಳನ್ನು ನೀಡುತ್ತದೆ.



ಮಾರುಕಟ್ಟೆ ಸ್ಥಿತಿ

     ಒಂದೆಲಗವು ಈಗ ವಿಶ್ವದ್ಯಾಂತ  ಬೇಡಿಕೆ ಇದ್ದು, ಎಲೆಗಳನ್ನು ವಿದೇಶಿಗಳಿಗೆ ರಪ್ತು ಮಾಡಲಾಗುತ್ತಿದೆ, ಒಣಗಿದ ಎಲೆಗಳಿಗೆ ಕೆ.ಜಿ.ಗೆ ನೂರು ರೂಪಾಯಿ,ತಾಜಾ ಎಲೆಗಳಿಗೆ 25 ರೂಪಾಯಿ,ಬೇರು ಸಮೇತ ಗಿಡಕ್ಕೆ 200 ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಕರ್ನಾಟಕದಲ್ಲಿ ಒಂದೆಲಗ ಬೆಳೆಯುವರ ಸಂಖ್ಯೆ ವಿರಳವಾಗಿದೆ. ಹಾಗಾಗಿ ಬೇರೆ ರಾಜ್ಯಗಳಿಂದ ಪಡೆಯಲಾಗುತ್ತಿದೆ ಎನ್ನುತ್ತಾರೆ ಬೆಂಗಳೂರಿನ ನೇಚರ್ ರೇಮಿಡ್ಸ್ ಕಂಪನಿಯ ಮಹೇಶ್ವರ್. (99452-32116)

    ಒಂದೆಲಗ ತಳಿಗಳು ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆಯಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ 080-23086100/251 ಸಂಪರ್ಕಿಸಬಹುದು.


August 26, 2021

ಗೋಮೂತ್ರದಿಂದ ಸಮೃದ್ದ ತೊಂಡೆ ಕಾಯಿಯ ಬೆಳೆ ಬೆಳೆದ ಪ್ರಯೋಗಶೀಲ ರೈತ ಬಸವರಾಜ

    ಪ್ರಯೋಗಗಳ ಮೂಲಕ ಒಳ್ಳೆಯ ಫಲಿತಾಂಶವನ್ನು ವ್ಯಕ್ತಿಯೊಬ್ಬ ಬದುಕಿನಲ್ಲಿ ಧಾರಣೆ ಮಾಡಿಕೊಳ್ಳುತ್ತಾನೆ. ತಾನು ಪ್ರಯೋಗಿಸಿದ ಫಲಿತಾಂಶದಿಂದ ಬಂದ ಹೊಸತು ಅವನನ್ನು ಮತ್ತೆ ಅನೇಕ ಸಾಧನೆಗಳಿಗೆ ಒಪ್ಪಿಕೊಳ್ಳುವಂತೆ ಮಾಡುತ್ತದೆ.ಹೆಸರಘಟ್ಟ ಹೋಬಳಿ ಬ್ಯಾತ ಗ್ರಾಮದ ರೈತ ಬಸವರಾಜು ಇಂತಹ ಪ್ರಯೋಗ ಶೀಲ ಮನೋಭಾವವನ್ನು ತನ್ನಲ್ಲಿ ಸಾಕಿಕೊಂಡಿರುವ ಅಪರೂಪದ ವ್ಯಕ್ತಿ.


                                                                  ರೈತ ಬಸವರಾಜು

  ತೊಂಡೆ ಕಾಯಿಯನ್ನು ಒಂದು ಎಕರೆಯಲ್ಲಿ ಅತಿ ಹೆಚ್ಚು ಬೆಳೆಯನ್ನು ಬೆಳೆದಿರುವ ಇವರು ಜಿಲ್ಲಾ ಕೃಷಿ ಪ್ರಶಸ್ತಿಯನ್ನು ಮುಡಿಗೆ ಏರಿಸಿಕೊಂಡವರು. ಏಳು ಎಕರೆ ಭೂಮಿಯನ್ನು ಕೃಷಿ ಚಟುವಟಿಕೆಗಳಿಗೆ ಮೀಸಲಿಟ್ಟು ಕೃಷಿಯನ್ನೇ ತಮ್ಮ ಕರ್ಮ ಭೂಮಿಯಾಗಿ ಮಾಡಿಕೊಂಡು ಅನೇಕ ಪ್ರಯೋಗಗಳನ್ನು ಮಾಡುತ್ತ ಬಂದಿರುವ ಪ್ರಯೋಗಶೀಲ ರೈತ ಇವರು.

  ತೊಂಡೆ ಕಾಯಿಯಲ್ಲಿ ಎರಡು ವಿಧಗಳು. ಒಂದು ನಾಟಿ ತೊಂಡೆ ಕಾಯಿ . ಮತ್ತೊಂದು ಸ್ಪೆಷಲ್ ತೊಂಡೆ ಕಾಯಿ . ಕಳೆದ ಎರಡು ವರ್ಷಗಳಿಂದ ಸ್ಪೆಷಲ್ ತೊಂಡೆ ಕಾಯಿಯನ್ನು ಒಂದು ಎಕರೆ ಪ್ರದೇಶದಲ್ಲಿ ಸುಮಾರು 250 ಕೆ.ಜಿ.ಯನ್ನು ಬೆಳೆದು ಅಚ್ಚರಿಯನ್ನು ಮೂಡಿಸಿದ್ದಾರೆ.ಇಷ್ಟು ಒಳ್ಳೆಯ ಇಳುವರಿಯನ್ನು ಪಡೆಯಲು ಸಾಧ್ಯವಾಗಿರುವುದು ಗೋಮೂತ್ರದಿಂದ ಎಂಬುವುದು ವಿಶೇಷ.


                                                      ಬೆಳೆದ ತೊಂಡೆಕಾಯಿ

   “ಭೂ ಒಡಲಲಿಗೆ ಅನೇಕ ರಸಾಯನಿಕವನ್ನು ಹಾಕಿ ಬೆಳೆಯನ್ನು ಬೆಳೆಯಬಹುದು. ಆದರೆ ಮುಂದಿನ ದಿನಗಳಲ್ಲಿ ಅದು ನೆಲದ ಫಲವತ್ತತೆಯನ್ನು ಹಾಳು ಮಾಡುತ್ತದೆ. ಭೂಮಿಯನ್ನು ಸೌಖ್ಯವಾಗಿ ಉಳಿಸಿಕೊಂಡು ಬೆಳೆಯನ್ನು ಬೆಳೆಯುವ ಬಗ್ಗೆ ಅಲೋಚನೆ ಮಾಡುತ್ತಿದ್ದೆ. ಇದಕ್ಕಾಗಿ ಅನೇಕ ಕೃಷಿ ಮೇಳಗಳನ್ನು,ಕೃಷಿ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದೆ. ಹಲವಾರು ವಿಚಾರ ಸಂಕಿರಣದಲ್ಲಿ ನನಗೆ ಸಿಕ್ಕಿದ್ದು ಅರಿವು. ಆ ಅರಿವಿನಲ್ಲಿ ಗೋಮೂತ್ರದಿಂದ ಹೆಚ್ಚಿನ ಇಳುವರಿ ಸಾಧ್ಯ ಎನ್ನುವ ಮಾರ್ಗವನ್ನು ಕಂಡು ಕೊಂಡೆ. ಅದನ್ನು ಅಳವಡಿಸಿಕೊಂಡು ಬೆಳೆಯನ್ನು ಬೆಳೆದೆ” ಎಂದು ತಾವು ಕಂಡು ಕೊಂಡ ಮಾರ್ಗದ ಬಗ್ಗೆ ಹೇಳುತ್ತಾರೆ ಬಸವರಾಜು.

    ಮೊದಲು ದಾಕ್ಷಿಯನ್ನು ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆದಿದ್ದರು. ಆದರೆ ದಾಕ್ಷಿಯು ಕೈಗೆ ಹತ್ತಲಿಲ್ಲ. ಆಗ ಇವರ ಮನಸ್ಸು ತೊಂಡೆ ಕಾಯಿಯತ್ತ ಹರಿಯಿತ್ತು. ತೊಂಡೆಕಾಯಿಯನ್ನು ಗೋಮೂತ್ರದಲ್ಲಿ ಬೆಳೆಯುವ ನಿರ್ಧಾರ ಮಾಡಿದರು. ಸುಮಾರು ಎರಡು ವರ್ಷಗಳ ಕಾಲ ಇದರ  ಬಗ್ಗೆ ತಿಳಿದುಕೊಂಡರು. ನಂತರ ನಾಲ್ಕು ಎಕರೆ ಪ್ರದೇಶದಲ್ಲಿ ತೊಂಡೆಕಾಯಿಯನ್ನು ಹಾಕಿದರು.


                                                  ಬೆಳೆದ ತೊಂಡೆಕಾಯಿ

  ತೊಂಡೆಕಾಯಿ ಹಾಕಿದ ಕೂಡಲೇ ಮೊದಲು  ಗೋಮೂತ್ರವನ್ನು ಸಂಗ್ರಹಿಸಲು ಒಂದು ತೊಟ್ಟಿಯನ್ನು ನಿರ್ಮಿಸಿದರು. ಗೋಮೂತ್ರವನ್ನು ತೊಟ್ಟಿಯಿಂದ ಎತ್ತಲು ಒಂದು ಮೋಟಾರ್‍ನ್ನು ಅಳವಡಿಸಿದರು. ಗೋಮೂತ್ರ ಒಂದು ಡ್ರಾಮ್‍ಗೆ ಬೀಳುವಂತೆ ಮಾಡಿ,ಅದಕ್ಕೆ ಮರಳು ಮತ್ತು ಜಲ್ಲಿಯನ್ನು ಹಾಕಿ,ಅಲ್ಲಿಂದ ಅದು ಮತ್ತೊಂದು ಡ್ರಾಮ್‍ಗೆ ಹೋಗುವಂತೆ ಜೋಡಿಸಿ ಅಲ್ಲಿಂದ ಸೀದಾ ಗಿಡಗಳಿಗೆ ಡ್ರೀಪ್ ಮೂಲಕ ಗಿಡಗಳಿಗೆ ಅಯಿಸಿದರು. ವಾರಕ್ಕೆ ಮೂರು ಬಾರಿ ಈ ಕ್ರಮದಲ್ಲೇ ಗೋಮೂತ್ರವನ್ನು ಗಿಡಗಳಿಗೆ ಕೊಡುತ್ತ ಬಂದರು. ಒಂದರೆಡು ತಿಂಗಳಿನಲ್ಲಿ ಗಿಡಗಳು ಹಸನಾಗಿ ಬೆಳೆಯಲು ಪ್ರಾರಂಭಿಸಿದವು. ಮಾತ್ರವಲ್ಲ ಹೆಚ್ಚಿನ ಇಳುವರಿಯನ್ನು ನೀಡಿದವು.

  “ಒಂದು ಎಕರೆ ಪ್ರದೇಶಕ್ಕೆ ಒಂದು ಬಾರಿಗೆ 250 ಕೆ.ಜಿ.ಕಾಯಿಗಳನ್ನು ನೀಡುತ್ತಿದೆ. ವಾರದಲ್ಲಿ ಎರಡು ಬಾರಿ ಕಾಯಿಗಳನ್ನು ಕೀಳಾಗುತ್ತದೆ. ಒಂದು ಕೆ.ಜಿ. ತೊಂಡೆಕಾಯಿಯ ಬೆಲೆ ಈಗ ಸುಮಾರು ನಲವತ್ತು ರೂಪಾಯಿಗಳು ಇದೆ. ಒಂದು ಬಾರಿ ಒಂದು ಎಕರೆ ಪ್ರದೇಶದಲ್ಲಿ ಹತ್ತು ಸಾವಿರ ರೂಗಳು ದೊರೆಯುತ್ತದೆ. ತಿಂಗಳಿಗೆ ಎಂಟು ಬಾರಿ ಕಾಯಿಗಳನ್ನು ಕೀಳುವುದರಿಂದ ರೈತರಿಗೆ ಸರಿಸುಮಾರು 80 ಸಾವಿರ ರೂಗಳು ಲಭಿಸುತ್ತದೆ. ಎಲ್ಲ ಖರ್ಚು ಕಳೆದು 50 ಸಾವಿರಗಳ ನಿವ್ವಳ ಲಾಭ ದೊರೆಯುತ್ತದೆ”  ಎಂದು ಬಸವರಾಜು ಇದರಿಂದ ಪಡೆದ ಲಾಭವನ್ನು ಹೇಳುತ್ತಾರೆ.


  “ನನ್ನ ಇಡೀ ಕುಟುಂಬ ನನ್ನ ಜಮೀನಿನಲ್ಲೇ ದುಡಿಯುವುದರಿಂದ ಹೆಚ್ಚಿನ ವರಮಾನವನ್ನು ನನಗೆ ಕೃಷಿಯೇ ನೀಡುತ್ತದೆ.  ಕೃಷಿ ಬಿಟ್ಟು ಬೇರೆ ಏನನ್ನು ನಾನು ಯೋಚನೆ ಮಾಡಿಲ್ಲ. ಕೃಷಿಯಲ್ಲಿಯೇ ನಾನು ಬಾಳನ್ನು ಕಂಡು ಕೊಂಡವನು. ತಿಳಿದು ಮಾಡಿದರೆ ಬೆಳೆದ ಬೇಳೆ ನಮ್ಮನ್ನು ಉಳಿಸುತ್ತದೆ” ಎಂದು ಅತ್ಮವಿಶ್ವಾಸದಿಂದ ಮಾತನಾಡುತ್ತಾರೆ ಬಸವರಾಜು.


                                                           ಬಸವರಾಜು ಅವರ ಕುಟುಂಬ

  ಈಗಾಗಲೇ ತೊಂಡೆ ಕಾಯಿಯಲ್ಲಿ ಹೆಚ್ಚಿನ ಲಾಭವನ್ನು ಕಂಡಿರುವ ಇವರು ಮುಂದೆ ಅನೇಕ ಗಿಡಗಳ ತಳಿಯನ್ನು ಮಾಡುವ ಅಲೋಚನೆ ಇಟ್ಟಿಕೊಂಡಿದ್ದಾರೆ.ಇದೇ ಮಾದರಿಯಲ್ಲಿ ಅಗಸೆ ಗಿಡವನ್ನು ಬೆಳೆಯುವ ಹಂಬಲ ಇಟ್ಟುಕೊಂಡಿರುವ ಬಸವರಾಜು ಅವರಿಗೆ ನಾವೆಲ್ಲ ಒಂದು ಬೆಸ್ಟ್ ಆಫ್ ಲಕ್ ಹೇಳೋಣ. 

            *

ಗೋಮೂತ್ರದ ಕ್ರಮ

  ನೂರು ಲೀಟರ್ ನೀರಿಗೆ ಹತ್ತು ಲೀಟರ್ ಗೋಮೂತ್ರವನ್ನು ಹಾಕಬೇಕು. ನಂತರ ಉಳಿ ಮಜ್ಜಿಗೆಯನ್ನು ಎರಡು ಲೀಟರ್ ಹಾಕಿ ಚನ್ನಾಗಿ ಮಿಶ್ರಣ ಮಾಡಬೇಕು. ಮಿಶ್ರಣ ಮಾಡಿದ ಮೇಲೆ ಗಿಡಗಳಿಗೆ ಡೀಪ್ ಮೂಲಕ ಹಾಯಿಸಬೇಕು. ಗೋಮೂತ್ರದಲ್ಲಿ ರೋಗ ನಿರೋಧಕ ಶಕ್ತಿ ಇರುವುದರಿಂದ ಗಿಡಗಳು ಚನ್ನಾಗಿ ಬೆಳೆಯುತ್ತದೆ. ಮಾತ್ರವಲ್ಲ ಹೆಚ್ಚಿನ ಇಳುವರಿಯನ್ನು ಕೊಡುತ್ತದೆ. ಒಂದು ಎಕರೆಗೆ ಸುಮಾರು ಐನೂರು ಲೀಟರ್ ನೀರು ಗಿಡಗಳಿಗೆ ಬೇಕಾಗುತ್ತದೆ. 


                                                         ಗೋಮೂತ್ರದ ತೊಟ್ಟಿ

                                                                       *

                                          


                                     ಗೋಮೂತ್ರವನ್ನು ಜಲ್ಲಿ ಮರಳು ಸೋಸುತ್ತಿರುವುದು

                                                                   *

                                    ಬಸವರಾಜು ಅವರ phono no;-99169-84926

        




August 23, 2021

ತಾಯಿ ಮೇಲೆ ಬರೆದ ಹಾಡು ಇದು




 ಒಮ್ಮೆ ಕೇಳಿ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ  subcsribe ಮಾಡಿ

August 19, 2021

ಮಣ್ಣಿನ ಮಗನ ಹೊಸ ಸಂಶೋಧನೆ ಸೋಲಾರ್ ಕೀಟನಾಶಕ


    ನೆಟ್ಟ ಬೆಳೆ ಚಿಗುರೊಡೆದರೆ ರೈತರ ಮೊಗದಲ್ಲಿ ಸಂತಸವೊಂದು ಮೂಡುತ್ತದೆ. ಹೃದಯದಲ್ಲಿ ಅನಂದವು ಅನಾವರಣವಾಗುತ್ತದೆ. ನೆಲವನ್ನು ಉತ್ತಿ ಬಿತ್ತಿದ ಸಾರ್ಥಕದ ಭಾವವೊಂದು ತೆನೆಯೊಡೆಯುತ್ತದೆ. ನೆಮ್ಮದಿಯ ನಿದ್ರೆಯೊಂದು ಅವನೊಳ್ಳಗೆ ಜೀಕುತ್ತದೆ. ಬದುಕಿನ ಚಿತ್ತಾರಗಳ ಕನಸುಗಳು ಹೆಣೆದು ಕೊಳ್ಳುತ್ತವೆ. ಆದರೆ ಬೆಳಿಗ್ಗೆ ಎದ್ದು ನೆಟ್ಟ ಬೆಳೆಯ ಮೊಗ್ಗು ಕೀಟದ ಹಾವಳಿಯಿಂದ ಧ್ವಂಸವಾದಾಗ ರೈತರ ಸಂಕಟಕ್ಕೆ ಪದಗಳೇ ಇಲ್ಲ. ಕನಸು ಕಂಡ ಕಣ್ಣು ಒದ್ದೆಯಾಗಿರುತ್ತದೆ. ಕೀಟಗಳ ಹಾವಳಿಗೆ ಅವನ ಬದುಕು ನಜ್ಜುಗುಜ್ಜಾಗಿರುತ್ತದೆ.

  ಹೌದು ರೈತರ ಬಾಳನ್ನು ಕೀಟಗಳು ಹೈರಾಣ ಮಾಡುವಷ್ಟು ಬೇರೆನೂ ಮಾಡುವುದಿಲ್ಲ. ಕೀಟಗಳ ನಿಯಂತ್ರಣಕ್ಕೆ ಅವಾಹ್ಯತವಾಗಿ ಪ್ರಯೋಗಗಳು ಜರುಗುತ್ತಲೇ ಇವೆ. ಹೊಸ ಹೊಸ ಸಂಶೋಧನೆಗಳು ಅಗುತ್ತಲೇ ಇದೆ. ಅದರೂ ಕ್ರೀಟಾಭಾದೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಹರಿಹರದ ಮಲೆಬೆನ್ನೂರಿನ ರೈತ ಕರಿಬಸಪ್ಪ ಕೀಟಭಾದೆಗೆ ಶೋಧಿಸಿರುವ ಸೋಲಾರ್ ಕ್ರೀಟಾನಾಶಕ ಕೃಷಿ ಕ್ಷೇತ್ರದಲ್ಲಿ ಹೊಸದೊಂದು ಭರವಸೆಯನ್ನು ಮೂಡಿಸಿದೆ.  ರಸಾಯನಿಕವನ್ನು ಬಳಸದೇ ಕೀಟ ನಿಯಂತ್ರಣವನ್ನು ಮಾಡುವ ಈ ವಿದಾನ ಇಡೀ ದೇಶವೇ ಅವರತ್ತ ನೋಡುವಂತೆ ಮಾಡಿದೆ.



    ಮೂಲತಃ ರೈತನಾಗಿರುವ ಕರಿಬಸಪ್ಪ ತಮ್ಮ ಐದು ಎಕರೆ ಜಮೀನಿನಲ್ಲಿ ಅಡಿಕೆ,ಮಾವು,ರಾಮಫಲ,ಲಕ್ಷಣಫಲ,ಬೆಳೆಗಳನ್ನು ಬೆಳೆಯಲು ಪ್ರಾರಂಭಿಸಿದ್ದರು. ಕೀಟಗಳು ಮೊಗ್ಗನ್ನು ಕತ್ತರಿಸಿ ಬಿಡುವುದು,ಕಾಂಡವನ್ನು ಕೊರೆದು ಬಿಡುವುದು,ಎಲೆಗಳನ್ನು ತಿನ್ನುವುದು,ತೆಂಗಿನ ಗರಿಯನ್ನು ಕತ್ತರಿಸಿ ಬಿಡುವುದು,ಅಡಿಕೆ ಮರದಲ್ಲಿ ಚಿಗುರಿದ ಸುಳಿಯನ್ನು ತಿಂದು ಬಿಡುವುದು ಇಂತಹ ಅನೇಕ ಕೀಟಗಳ ಉಪಟಳದಿಂದ ಕರಿ ಬಸಪ್ಪ ದೃತಿ ಗೆಟ್ಟರು. ಕೀಟನಾಶಕವನ್ನು ಟಾನ್‍ಗಟ್ಟಲೇ ತಂದು ಸಿಂಪಡಿಸಿದರು. ಕೈ ಖಾಲಿಯಾದಾಗ ಸಾಲ ಮಾಡಿದರು. ಸಾಲ ತೀರಿಸಲು ಅಗದೇ ಇದ್ದಾಗ ಅತ್ಮಹತ್ಯೆಯ ಯೋಚನೆಯೊಂದು ಅವರಲ್ಲಿ ಸುಳಿಯಿತ್ತು. 

   ಕರಿಬಸಪ್ಪನವರು ರಾತ್ರಿ ಹೊತ್ತು ಬೆಳೆಗಳಿಗೆ ನೀರು ಕಟ್ಟಲು ಸೋಲಾರ್ ದೀಪವನ್ನು ಇರಿಸಿಕೊಂಡಿದ್ದರು.ಅಂದೊಂದು ಸಂಜೆ ಬೆಳೆಗಳಿಗೆ ನೀರು ಉಣಿಸಿ ಸೋಲಾರ್ ಲೈಟ್‍ನ್ನು ತೋಟದ ತೊಟ್ಟಿಯ ಮೇಲೆ ಇಟ್ಟು ಮನೆಗೆ ಮರಳಿದರು. ಬೆಳಿಗ್ಗೆ ತೋಟಕ್ಕೆ ಹೋದಾಗ ಅಚ್ಚರಿಯೊಂದು ಅವರಿಗೆ ಕಾದಿತ್ತು. ತೊಟ್ಟಿಯ ಒಳಗೆ ಅನೇಕ ಕೀಟಗಳು ಬಿದ್ದು ಸತ್ತು ಹೋಗಿದ್ದವು. ಒಂದು ಕ್ಷಣ ಅಚ್ಚರಿ ಗಲಿಬಲಿಗೊಂಡ ಅವರಿಗೆ ಅನೇಕ ಕುತೂಹಲಗಳು ಹುಟ್ಟಿಕೊಂಡವು. ಮರು ದಿವಸ ಉದ್ದೇಶ ಪೂರ್ವಕವಾಗಿಯೇ ಸೋಲಾರ್ ದೀಪವನ್ನು ಹೊತ್ತಿಸಿ ಹೋದರು. ಬೆಳಿಗ್ಗೆ ಮತ್ತೆ ಅದೇ ಅಚ್ಚರಿ ಅವರಿಗೆ ಕಾದಿತ್ತು. ಅಲ್ಪ ಪ್ರಮಾಣದಲ್ಲಿ ಕೀಟಗಳು ಬಿದ್ದು ತೊಟ್ಟಿಯಲ್ಲಿ ಸತ್ತಿದ್ದವು.ಈ ಬೆಳವಣಿಗೆಯ ಜಾಡು ಹತ್ತಿದ ಕರಿಬಸಪ್ಪ  ಎರಡು ವರ್ಷಗಳ ಕಾಲ ಅನೇಕ ಪ್ರಯೋಗಳನ್ನು ಮಾಡಿ ಕೊನೆಗೆ ಸೋಲಾರ್ ಕೀಟನಾಶಕ ಯಂತ್ರವನ್ನು ಸಿದ್ದಪಡಿಸಿದರು. 



    ಕರಿಬಸಪ್ಪನವರ ಈ ಸೋಲಾರ್ ಕೀಟನಾಶಕ ಯಂತ್ರವು ಬೆಳೆಗಳಿಗೆ ಸಿಂಪರಿಸುವ ರಸಾಯನಿಕದಿಂದ ಬೆಳೆಯನ್ನು ದೂರವಿರಿಸುತ್ತದೆ. ರೈತರ ಸಮಯ ಮತ್ತು ಹಣ ಎರಡು ಉಳಿತಾಯವಾಗುತ್ತದೆ. ಈಗಾಗಲೇ ರಾಜ್ಯದ ಐನ್ನೂರುಕ್ಕೂ ಹೆಚ್ಚು ರೈತರು ಇದನ್ನು ಅಳವಡಿಸಿಕೊಂಡು ಉತ್ತಮ ಬೆಳೆಯನ್ನು ಬೆಳೆಯುತ್ತಿದ್ದಾರೆ. 

  ಯಂತ್ರದ ನಿರ್ವಹಣೆ ಬಲು ಸುಲಭ

    ಎರಡು ವರ್ಷಗಳ ಕಾಲ ಬೇರೆ ಬೇರೆ ಅಯಾಮಗಳಲ್ಲಿ ಪ್ರಯೋಗಗಳನ್ನು ಮಾಡಿದ ಕರಿ ಬಸಪ್ಪನವರು ಸುಲಭವಾಗಿ ನಿರ್ವಹಣೆ ಮಾಡುವ ರೀತಿ ಸೋಲಾರ್ ಯಂತ್ರವನ್ನು ವಿನ್ಯಾಸಗೊಳಿಸಿದ್ದಾರೆ. ಸುಮಾರು ಆರು ಅಡಿ ಎತ್ತರದ ಕಬ್ಬಿಣದ ಮೇಲೆ ಬೀದಿ ದೀಪದ ಮಾದರಿಯಂತೆ ಸೋಲಾರ್ ದೀಪವನ್ನು ಜೋಡಿಸಲಾಗಿದೆ. ಕಬ್ಬಿಣದ ತುದಿಯ ಮೇಲೆ ಸೋಲಾರ್ ಪ್ಯಾನಲ್‍ಗಳನ್ನು ಅಳವಡಿಸಿ,ದೀಪದ ಕೆಳಗೆ ಒಂದೂವರೆ ಅಡಿ ಅಂತರದಲ್ಲಿ ಬಕೆಟ್‍ನ್ನು ಇರಿಸಲಾಗಿದೆ. ಸೋಲಾರ್ ಪ್ಯಾನಲ್‍ಗಳು ಸೂರ್ಯನ ಬೆಳಕಿಗೆ ಚಾರ್ಜ್ ಅಗುತ್ತವೆ. ಸಂಜೆ ಅರು ಘಂಟೆಯ ಸುಮಾರಿಗೆ ಸೂರ್ಯ ಮುಳುಗಿದ ಕೂಡಲೇ ಎಲ್.ಇ.ಡಿ. ಬಲ್ಪ್‍ಗಳು ಯಾರ ಸಹಾಯವಿಲ್ಲದೇ ತನ್ನಷ್ಟಕ್ಕೆ ತಾನು ಉರಿಯಲಾರಂಭಿಸಿತ್ತದೆ. ಸಂಜೆ 6ರಿಂದ ರಾತ್ರಿ ಹತ್ತರ ತನಕ ಶತ್ರು ಕೀಟಗಳು ಓಡಾಡುತ್ತಾವೆ. ಅವುಗಳು ಸೋಲಾರ್ ಬಲ್ಪ್‍ಗಳ ಅರ್ಕಷಣೆಗೆ ಒಳಗಾಗಿ  ಹಾರಾಡಿ ಸೋಲಾರ್ ದೀಪದ ಕೆಳಗೆ ಇರುವ ಬಕೆಟ್ ನೀರಿನಲ್ಲಿ ಬಿದ್ದು ಸಾಯುತ್ತವೆ. ರಾತ್ರಿ ಹತ್ತರ ಮೇಲೆ ಮಿತ್ರ ಕೀಟಗಳು ಓಡಾಡುವುದರಿಂದ ಸೋಲಾರ್ ಬಲ್ಪ್‍ಗಳು ತನ್ನಷ್ಟಕ್ಕೇ ತಾನು ಸ್ಥಗಿತಗೊಳ್ಳುತ್ತದೆ. 

    ರೈತರು ಈ ಯಂತ್ರವನ್ನು ಸುಲಭವಾಗಿ ಕೊಂಡೊಯ್ಯಬಹುದು. ಮಾತ್ರವಲ್ಲ ಬೆಳಿಗ್ಗೆ ಎದ್ದು ಬಕೆಟ್‍ನಲ್ಲಿ ಬಿದ್ದ ಕೀಟಗಳನ್ನು ಹೊರಗೆ ಚೆಲ್ಲಿ ಪುನಃ ನೀರು ಇಟ್ಟರೆ ಸಾಕು.ರಸಾಯನಿಕವನ್ನು ಸಿಂಪಡಿಸಬೇಕಿಲ್ಲ. ಕ್ರೀಮಿನಾಶಕಕ್ಕೆ ದುಡ್ಡು ಸುರಿಯಬೇಕಿಲ್ಲ.ಸಾಲದ ಭಾದೆಯು ಇರುವುದಿಲ್ಲ. ಒಂದು ಯಂತ್ರ ಐದಾರು ವರ್ಷಗಳ ಕಾಲ ಬಳಕೆ ಬರುತ್ತದೆ.  ಒಂದು ಎಕೆರೆಗೆ ಒಂದು ಯಂತ್ರ ಸಾಕು ಎನ್ನುವುರು ಕರಿಬಸಪ್ಪನವರ ಸಲಹೆ.

    ರೈತರ ಸಮಸ್ಯೆಯ ಬಗ್ಗೆ ರೈತನೇ ಸಂಶೋಧಿಸಿರುವ ಈ ಯಂತ್ರ ಇಡೀ ದೇಶದ ಕೃಷಿ ವಲಯದಲ್ಲಿ ಸದ್ದು ಮಾಡುತ್ತಿದೆ. ಕನ್ನಡ ನಾಡಿನ ರೈತನ ಈ ಸಂಶೋಧನೆಗೆ ನಾವು ಬೆನ್ನು ತಟ್ಟಬೇಕಾಗಿದೆ,ಪ್ರೋತ್ಸಾಹಿಸಬೇಕಾಗಿದೆ.

ಹೆಚ್ಚಿನ ಮಾಹಿತಿಗೆ ಕರಿಬಸಪ್ಪನವರ ಪೋನ್ ನಂಬರ್ :98809-73218

                *

ದಾಳಿಂಬೆ ಫಲ ಕೈಗೆ ಸಿಕ್ಕಿತ್ತು



    ಶಿವಮೊಗ್ಗ ಜಿಲ್ಲೆಯ ಕಡೂರಿನಲ್ಲಿದ್ದ ಐದು ಎಕರೆ ಜಮೀನಿನಲ್ಲಿ ನಾನು ದಾಳಿಂಬೆಯನ್ನು ಹಾಕಿದೆ. ಮೊದಲ ವರ್ಷ ಐದು ಎಕರೆ ದಾಳಿಂಬೆ ಗಿಡಗಳಿಗೆ ಸಿಂಪಡಿಸಿದ ಕೀಟನಾಶಕದ ಒಟ್ಟು ದುಡ್ಡ ಒಂದೂವರೆ ಲಕ್ಷ. ದಾಳಿಂಬೆ ಗಿಡಗಳಿಗೆ ಕೀಟಗಳ ಹಾವಳಿ ಹೆಚ್ಚು. ಪ್ರತಿ ಏಳು ದಿನಗಳಿಗೆ ಒಮ್ಮೆಯಾದರೂ ಕೀಟನಾಶಕವನ್ನು ಸಿಂಪಡಿಸಬೇಕು. ಇಲ್ಲದಿದ್ದರೆ ದಾಳಿಂಬೆ ಹೂವನ್ನು ಮೊಗ್ಗನ್ನು ಕೀಟಗಳು ಧ್ವಂಸ ಮಾಡಿ ಬಿಡುತ್ತದೆ. ಏಳು ದಿನಗಳಿಗೆ ಒಮ್ಮೆ ಕೀಟನಾಶಕವನ್ನು ಸಿಂಪಡಿಸಲು ಲಕ್ಷಗಳನ್ನು ನಾನು ಸುರಿಯಲೇ ಬೇಕಾಗಿತ್ತು. ಮೊದಲ ವರ್ಷ ಒಳ್ಳೆಯ ಬೆಳೆ ನನಗೆ ಬರಲಿಲ್ಲ. ದಾಳಿಂಬೆ ಹಾಕ ಬಾರದಿತ್ತು ತಪ್ಪು ನಿರ್ಧಾರ ಮಾಡಿದೆ ಎಂದು ಅನೇಕ ಸಾರಿ ಯೋಚನೆ ಮಾಡಿದೆ. 

   ಕೀಟಗಳ ನಿಯಂತ್ರಣಕ್ಕೆ ಬೇರೆ ಮಾರ್ಗವನ್ನು ಅನುಸರಿಸ ಬೇಕೆಂದು ಪರಿಚಯಸ್ಥರ ಬಳಿ ನನ್ನ ನೋವನ್ನು ಹೇಳಿ ಕೊಳ್ಳುತ್ತಿದ್ದೆ. ಗೆಳೆಯನೊಬ್ಬ ಬೇವಿನ ಎಣ್ಣೆ,ಮತ್ತು ಗೋಮೂತ್ರದ ಮೂಲಕ ಕೀಟಗಳನ್ನು ನಿಯಂತ್ರಣ ಮಾಡಬಹುದು ಎಂದು ಸಲಹೆ ನೀಡಿದ. ಎರಡನೇಯ ವರ್ಷ ಆ ಕ್ರಮದಲ್ಲಿಯೇ ದಾಳಿಂಬೆ ಗಿಡಗಳಿಗೆ ಔಷಧಿ ಸಿಂಪಡಿಸಿದೆ. ಕೊಂಚ ಮಟ್ಟಿನ ಕೀಟಗಳ ಹಾವಳಿ ತಪ್ಪಿತ್ತು. ಆದರೆ ವಿಪರೀತ ಮಳೆಯಿಂದ ದಾಳಿಂಬೆ ಕೈ ತಪ್ಪಿ ಹೋಯಿತ್ತು. ಕೈ ಸುಟ್ಟುಕೊಂಡೆ.

  ತೋಟಕ್ಕೆ ಬೇರೆ ಬೆಳೆಯನ್ನು ಹಾಕುವ ನಿರ್ಧಾರವೊಂದು ಮನದಲ್ಲಿ ಹುಟ್ಟಿತ್ತು. ಬೇಡಪ್ಪ ಈ ಹಾಳು ದಾಳಿಂಬೆ ಎನ್ನುವಾಗ ಶಿವಮೊಗ್ಗದ ಮಿತ್ರನೊಬ್ಬ ಸೋಲಾರ್ ಕೀಟನಾಶಕ ಯಂತ್ರದ ಬಗ್ಗೆ ಹೇಳಿದ.ಮೊದಲು ಅನುಮಾನ ಬಂತು. ಅಯ್ಯೋ ದುಬಾರಿ ಕೀಟನಾಶಕವನ್ನು ತಂದು ಸಿಂಪಡಿಸಿದರೂ ನಿಯಂತ್ರಣಕ್ಕೆ ಬಾರದ ಈ ಕೀಟಗಳು ಈ ಸೋಲಾರ್ ದೀಪಕ್ಕೆ ಬಗ್ಗುತ್ತವೆಯೋ? ಎನ್ನುವ ಪ್ರಶ್ನೆ ಇಟ್ಟುಕೊಂಡೆ ಮೊದಲು ನಾಲ್ಕು ಯಂತ್ರವನ್ನು ಹಾಕಿದೆ.

    ನಿಜಕ್ಕೂ ಅಚ್ಚರಿಯಾಯಿತ್ತು. ಮೊದಲೇ ದಿನವೇ ರಾಶಿಗಟ್ಟಲೇ ಕೀಟಗಳು ಬಿದ್ದು ಹೋಗಿದ್ದವು. ಬೆಳೆಯಲ್ಲಿ ಎನೋ ಒಂದು ಸೊಬಗು ಇತ್ತು. ಏಳು ದಿನಗಳಿಗೆ ಒಮ್ಮೆ ಸಿಂಪಡಿಸುತ್ತಿದ್ದ ಕೀಟನಾಶಕವನ್ನು ಈ ಸಾರಿ ಸಿಂಪಡಿಸಿಲ್ಲ. ಆದರೆ ಗಿಡಗಳಲ್ಲಿ ದಾಳಿಂಬೆ ನಳನಳಿಸಿದೆ. ಕೀಟಗಳ ಹಾವಳಿ ತಪ್ಪಿದೆ. 120 ರೂಪಾಯಿಗಳಂತೆ ದಾಳಿಂಬೆಯನ್ನು ಮಾರಾಟ ಮಾಡಿದ್ದೀನಿ. ಭೂಮಿಗೆ ಕೀಟನಾಶಕ ಸಿಂಪಡಿಸಿ ಸಿಂಪಡಿಸಿ ಒಣಗಿದ ಭೂಮಿಯಂತೆ ಕಾಣುತ್ತಿತ್ತು. ಆದರೆ ಈಗ ಭೂಮಿಯಲ್ಲಿ ಹಸಿರು ಚಿಗುರೊಡಿದೆ. ಎರಡು ವರ್ಷಗಳಲ್ಲಿ ಕಳೆದು ಕಂಡ ದುಡ್ಡು ಈ ಬಾರಿ ಮರಳಿ ಬಂದಿದೆ. ಸೋಲಾರ್ ಕೀಟನಾಶಕ ಯಂತ್ರವು ಕೃಷಿ ಮಾಡಲು ಒಂದಿಷ್ಟು ಶಕ್ತಿ ನೀಡಿದೆ. ರೈತರ ಪಾಲಿಗೆ ಇದು ಅಶಾ ಕಿರಣ.

ಜಿ.ಎನ್.ರವಿ {98451-44188} 

ಪ್ರಗತಿ ಪರ ಕೃಷಿಕ ಶಿವಮೊಗ್ಗ 

             *

ಭತ್ತಕ್ಕೆ ಬಂಪರು ಇಳುವರಿ ಬಂತು



   ನನ್ನೂರು ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಮಲೆಬೆನ್ನೂರು. ನಮ್ಮದ್ದು ಒಟ್ಟು ಹನ್ನೇರಡು ಎಕರೆ ಜಮೀನಿದೆ. ಐದು ಎಕರೆ ಭತ್ತವನ್ನು,ಎರಡು ಎಕರೆ ಅಡಿಕೆಯನ್ನು,ಆರು ಎಕರೆ ಸೂರ್ಯಕಾಂತಿಯನ್ನು ಹಾಕಿದ್ದೀವಿ. ಎಲ್ಲ ರೈತರಂತೆ ನಾವು ಬೆಳೆಗಳಿಗೆ ಕೀಟನಾಶಕವನ್ನು ಕಾಲ ಕಾಲಕ್ಕೆ ಸಿಂಪಡಿಸುತ್ತ ಇದ್ದೀವಿ. ಒಂದು ಎಕರೆಗೆ ಹನ್ನೇರಡರಿಂದ 13 ಸಾವಿರದಷ್ಟು ಕೀಟನಾಶಕದ ಖರ್ಚು ಬರುತ್ತಿತ್ತು. ಬೆಳೆಗಳಿಗೆ ಐದಾರು ಸಾರಿ ಕೀಟನಾಶಕವನ್ನು ಸಿಂಪಡಿಸುತ್ತಿದ್ದೀವಿ. ಅಷ್ಟು ಸಾರಿ ಸಿಂಪಡಿಸಿದರೆ ಮಾತ್ರ ಭತ್ತದ ಬೆಳೆ ಶೇಕಡ ಮೂವತ್ತರಿಂದ ನಲವತ್ತುರಷು ಕೈಗೆ ಸಿಗುತ್ತಿತ್ತು.

    ನಮ್ಮ ಕುಟುಂಬದ ಅಪ್ತರಿಂದ ಸೋಲಾರ್ ಕೀಟನಾಶಕ ಯಂತ್ರದ ಪರಿಚಯವಾಯಿತ್ತು. ತುಸು ಅನುಮಾನದಿಂದಲೇ ಇದನ್ನು ಮೊದಲು ಒಂದು ಖರೀದಿಸಿ ಒಂದು ಎಕರೆಗೆ ಅಳವಡಿಸಿದೆ. ಪ್ರತಿ ದಿನ ಬೀಳುತ್ತಿದ್ದ ಕೀಟಗಳಿಗೆ ನಾನು ಮಾರು ಹೋದೆ. ಒಂದು ಎಕರೆಯ ಭತ್ತದ ತೆನೆಗಳು ಉಳಿದ ಭತ್ತದ ತೆನೆಗಳಿಂತ ತುಸು ದಪ್ಪವಾಗಿ ಬೆಳೆದವು. ಈ ಬೆಳವಣಿಗೆಯಿಂದ ಉಳಿದ ಎಲ್ಲ ಬೆಳೆಗಳಿಗೆ ಸೋಲಾರ್ ಕೀಟನಾಶಕದ ಯಂತ್ರವನ್ನು ಹಾಕಿದೆ. ಒಂದು ಎಕರೆಗೆ 30 ಮೂಟೆ ಬರುತ್ತಿದ್ದ ಭತ್ತ,ಸೋಲಾರ್ ಯಂತ್ರವನ್ನು ಹಾಕಿದ ಮೇಲೆ 45 ರಿಂದ 47 ಮೂಟೆ ಬರುತ್ತಿದೆ.

    ಈಗ ಯಾವುದೇ ಕೀಟನಾಶಕವನ್ನು ನಾನು ಸಿಂಪಡಿಸುತ್ತಿಲ್ಲ. ಸೂರ್ಯಕಾಂತಿ ಬೆಳೆ ಪೂರ್ಣವಾಗಿ ಕೈಗೆ ಸಿಕ್ಕಿದೆ. ನಿಜಕ್ಕೂ ಇದು ರೈತರ ಪಾಲಿಗೆ ವರದಾನವಾಗಿದೆ.

ಪೂಜಾರ ಗಂಗೆನಳ್ಳೆಪ್ಪ {91102-21947]   ಪ್ರಗತಿ ಪರ ಕೃಷಿಕ.  ಮಲೆಬೆನ್ನೂರು

*




ಬೂತ್ ಮಟ್ಟದಲ್ಲಿ ಸಂಘಟನೆಗೆ ಕಾಂಗ್ರೇಸ್ ಗಾಂಧಿ ನಡೆ

ಸೋಲದೇವನಹಳ್ಳಿ ಗ್ರಾಮದಲ್ಲಿ ನಡೆದ ಗಾಂಧಿ ನಡೆ ಕಾರ್ಯಗಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಾತನಾಡಿದರು. ಹಿರಿಯ ಮುಖಂಡರಾದ ವೀರಪ್ಪಮೊ...