August 26, 2021

ಗೋಮೂತ್ರದಿಂದ ಸಮೃದ್ದ ತೊಂಡೆ ಕಾಯಿಯ ಬೆಳೆ ಬೆಳೆದ ಪ್ರಯೋಗಶೀಲ ರೈತ ಬಸವರಾಜ

    ಪ್ರಯೋಗಗಳ ಮೂಲಕ ಒಳ್ಳೆಯ ಫಲಿತಾಂಶವನ್ನು ವ್ಯಕ್ತಿಯೊಬ್ಬ ಬದುಕಿನಲ್ಲಿ ಧಾರಣೆ ಮಾಡಿಕೊಳ್ಳುತ್ತಾನೆ. ತಾನು ಪ್ರಯೋಗಿಸಿದ ಫಲಿತಾಂಶದಿಂದ ಬಂದ ಹೊಸತು ಅವನನ್ನು ಮತ್ತೆ ಅನೇಕ ಸಾಧನೆಗಳಿಗೆ ಒಪ್ಪಿಕೊಳ್ಳುವಂತೆ ಮಾಡುತ್ತದೆ.ಹೆಸರಘಟ್ಟ ಹೋಬಳಿ ಬ್ಯಾತ ಗ್ರಾಮದ ರೈತ ಬಸವರಾಜು ಇಂತಹ ಪ್ರಯೋಗ ಶೀಲ ಮನೋಭಾವವನ್ನು ತನ್ನಲ್ಲಿ ಸಾಕಿಕೊಂಡಿರುವ ಅಪರೂಪದ ವ್ಯಕ್ತಿ.


                                                                  ರೈತ ಬಸವರಾಜು

  ತೊಂಡೆ ಕಾಯಿಯನ್ನು ಒಂದು ಎಕರೆಯಲ್ಲಿ ಅತಿ ಹೆಚ್ಚು ಬೆಳೆಯನ್ನು ಬೆಳೆದಿರುವ ಇವರು ಜಿಲ್ಲಾ ಕೃಷಿ ಪ್ರಶಸ್ತಿಯನ್ನು ಮುಡಿಗೆ ಏರಿಸಿಕೊಂಡವರು. ಏಳು ಎಕರೆ ಭೂಮಿಯನ್ನು ಕೃಷಿ ಚಟುವಟಿಕೆಗಳಿಗೆ ಮೀಸಲಿಟ್ಟು ಕೃಷಿಯನ್ನೇ ತಮ್ಮ ಕರ್ಮ ಭೂಮಿಯಾಗಿ ಮಾಡಿಕೊಂಡು ಅನೇಕ ಪ್ರಯೋಗಗಳನ್ನು ಮಾಡುತ್ತ ಬಂದಿರುವ ಪ್ರಯೋಗಶೀಲ ರೈತ ಇವರು.

  ತೊಂಡೆ ಕಾಯಿಯಲ್ಲಿ ಎರಡು ವಿಧಗಳು. ಒಂದು ನಾಟಿ ತೊಂಡೆ ಕಾಯಿ . ಮತ್ತೊಂದು ಸ್ಪೆಷಲ್ ತೊಂಡೆ ಕಾಯಿ . ಕಳೆದ ಎರಡು ವರ್ಷಗಳಿಂದ ಸ್ಪೆಷಲ್ ತೊಂಡೆ ಕಾಯಿಯನ್ನು ಒಂದು ಎಕರೆ ಪ್ರದೇಶದಲ್ಲಿ ಸುಮಾರು 250 ಕೆ.ಜಿ.ಯನ್ನು ಬೆಳೆದು ಅಚ್ಚರಿಯನ್ನು ಮೂಡಿಸಿದ್ದಾರೆ.ಇಷ್ಟು ಒಳ್ಳೆಯ ಇಳುವರಿಯನ್ನು ಪಡೆಯಲು ಸಾಧ್ಯವಾಗಿರುವುದು ಗೋಮೂತ್ರದಿಂದ ಎಂಬುವುದು ವಿಶೇಷ.


                                                      ಬೆಳೆದ ತೊಂಡೆಕಾಯಿ

   “ಭೂ ಒಡಲಲಿಗೆ ಅನೇಕ ರಸಾಯನಿಕವನ್ನು ಹಾಕಿ ಬೆಳೆಯನ್ನು ಬೆಳೆಯಬಹುದು. ಆದರೆ ಮುಂದಿನ ದಿನಗಳಲ್ಲಿ ಅದು ನೆಲದ ಫಲವತ್ತತೆಯನ್ನು ಹಾಳು ಮಾಡುತ್ತದೆ. ಭೂಮಿಯನ್ನು ಸೌಖ್ಯವಾಗಿ ಉಳಿಸಿಕೊಂಡು ಬೆಳೆಯನ್ನು ಬೆಳೆಯುವ ಬಗ್ಗೆ ಅಲೋಚನೆ ಮಾಡುತ್ತಿದ್ದೆ. ಇದಕ್ಕಾಗಿ ಅನೇಕ ಕೃಷಿ ಮೇಳಗಳನ್ನು,ಕೃಷಿ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದೆ. ಹಲವಾರು ವಿಚಾರ ಸಂಕಿರಣದಲ್ಲಿ ನನಗೆ ಸಿಕ್ಕಿದ್ದು ಅರಿವು. ಆ ಅರಿವಿನಲ್ಲಿ ಗೋಮೂತ್ರದಿಂದ ಹೆಚ್ಚಿನ ಇಳುವರಿ ಸಾಧ್ಯ ಎನ್ನುವ ಮಾರ್ಗವನ್ನು ಕಂಡು ಕೊಂಡೆ. ಅದನ್ನು ಅಳವಡಿಸಿಕೊಂಡು ಬೆಳೆಯನ್ನು ಬೆಳೆದೆ” ಎಂದು ತಾವು ಕಂಡು ಕೊಂಡ ಮಾರ್ಗದ ಬಗ್ಗೆ ಹೇಳುತ್ತಾರೆ ಬಸವರಾಜು.

    ಮೊದಲು ದಾಕ್ಷಿಯನ್ನು ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆದಿದ್ದರು. ಆದರೆ ದಾಕ್ಷಿಯು ಕೈಗೆ ಹತ್ತಲಿಲ್ಲ. ಆಗ ಇವರ ಮನಸ್ಸು ತೊಂಡೆ ಕಾಯಿಯತ್ತ ಹರಿಯಿತ್ತು. ತೊಂಡೆಕಾಯಿಯನ್ನು ಗೋಮೂತ್ರದಲ್ಲಿ ಬೆಳೆಯುವ ನಿರ್ಧಾರ ಮಾಡಿದರು. ಸುಮಾರು ಎರಡು ವರ್ಷಗಳ ಕಾಲ ಇದರ  ಬಗ್ಗೆ ತಿಳಿದುಕೊಂಡರು. ನಂತರ ನಾಲ್ಕು ಎಕರೆ ಪ್ರದೇಶದಲ್ಲಿ ತೊಂಡೆಕಾಯಿಯನ್ನು ಹಾಕಿದರು.


                                                  ಬೆಳೆದ ತೊಂಡೆಕಾಯಿ

  ತೊಂಡೆಕಾಯಿ ಹಾಕಿದ ಕೂಡಲೇ ಮೊದಲು  ಗೋಮೂತ್ರವನ್ನು ಸಂಗ್ರಹಿಸಲು ಒಂದು ತೊಟ್ಟಿಯನ್ನು ನಿರ್ಮಿಸಿದರು. ಗೋಮೂತ್ರವನ್ನು ತೊಟ್ಟಿಯಿಂದ ಎತ್ತಲು ಒಂದು ಮೋಟಾರ್‍ನ್ನು ಅಳವಡಿಸಿದರು. ಗೋಮೂತ್ರ ಒಂದು ಡ್ರಾಮ್‍ಗೆ ಬೀಳುವಂತೆ ಮಾಡಿ,ಅದಕ್ಕೆ ಮರಳು ಮತ್ತು ಜಲ್ಲಿಯನ್ನು ಹಾಕಿ,ಅಲ್ಲಿಂದ ಅದು ಮತ್ತೊಂದು ಡ್ರಾಮ್‍ಗೆ ಹೋಗುವಂತೆ ಜೋಡಿಸಿ ಅಲ್ಲಿಂದ ಸೀದಾ ಗಿಡಗಳಿಗೆ ಡ್ರೀಪ್ ಮೂಲಕ ಗಿಡಗಳಿಗೆ ಅಯಿಸಿದರು. ವಾರಕ್ಕೆ ಮೂರು ಬಾರಿ ಈ ಕ್ರಮದಲ್ಲೇ ಗೋಮೂತ್ರವನ್ನು ಗಿಡಗಳಿಗೆ ಕೊಡುತ್ತ ಬಂದರು. ಒಂದರೆಡು ತಿಂಗಳಿನಲ್ಲಿ ಗಿಡಗಳು ಹಸನಾಗಿ ಬೆಳೆಯಲು ಪ್ರಾರಂಭಿಸಿದವು. ಮಾತ್ರವಲ್ಲ ಹೆಚ್ಚಿನ ಇಳುವರಿಯನ್ನು ನೀಡಿದವು.

  “ಒಂದು ಎಕರೆ ಪ್ರದೇಶಕ್ಕೆ ಒಂದು ಬಾರಿಗೆ 250 ಕೆ.ಜಿ.ಕಾಯಿಗಳನ್ನು ನೀಡುತ್ತಿದೆ. ವಾರದಲ್ಲಿ ಎರಡು ಬಾರಿ ಕಾಯಿಗಳನ್ನು ಕೀಳಾಗುತ್ತದೆ. ಒಂದು ಕೆ.ಜಿ. ತೊಂಡೆಕಾಯಿಯ ಬೆಲೆ ಈಗ ಸುಮಾರು ನಲವತ್ತು ರೂಪಾಯಿಗಳು ಇದೆ. ಒಂದು ಬಾರಿ ಒಂದು ಎಕರೆ ಪ್ರದೇಶದಲ್ಲಿ ಹತ್ತು ಸಾವಿರ ರೂಗಳು ದೊರೆಯುತ್ತದೆ. ತಿಂಗಳಿಗೆ ಎಂಟು ಬಾರಿ ಕಾಯಿಗಳನ್ನು ಕೀಳುವುದರಿಂದ ರೈತರಿಗೆ ಸರಿಸುಮಾರು 80 ಸಾವಿರ ರೂಗಳು ಲಭಿಸುತ್ತದೆ. ಎಲ್ಲ ಖರ್ಚು ಕಳೆದು 50 ಸಾವಿರಗಳ ನಿವ್ವಳ ಲಾಭ ದೊರೆಯುತ್ತದೆ”  ಎಂದು ಬಸವರಾಜು ಇದರಿಂದ ಪಡೆದ ಲಾಭವನ್ನು ಹೇಳುತ್ತಾರೆ.


  “ನನ್ನ ಇಡೀ ಕುಟುಂಬ ನನ್ನ ಜಮೀನಿನಲ್ಲೇ ದುಡಿಯುವುದರಿಂದ ಹೆಚ್ಚಿನ ವರಮಾನವನ್ನು ನನಗೆ ಕೃಷಿಯೇ ನೀಡುತ್ತದೆ.  ಕೃಷಿ ಬಿಟ್ಟು ಬೇರೆ ಏನನ್ನು ನಾನು ಯೋಚನೆ ಮಾಡಿಲ್ಲ. ಕೃಷಿಯಲ್ಲಿಯೇ ನಾನು ಬಾಳನ್ನು ಕಂಡು ಕೊಂಡವನು. ತಿಳಿದು ಮಾಡಿದರೆ ಬೆಳೆದ ಬೇಳೆ ನಮ್ಮನ್ನು ಉಳಿಸುತ್ತದೆ” ಎಂದು ಅತ್ಮವಿಶ್ವಾಸದಿಂದ ಮಾತನಾಡುತ್ತಾರೆ ಬಸವರಾಜು.


                                                           ಬಸವರಾಜು ಅವರ ಕುಟುಂಬ

  ಈಗಾಗಲೇ ತೊಂಡೆ ಕಾಯಿಯಲ್ಲಿ ಹೆಚ್ಚಿನ ಲಾಭವನ್ನು ಕಂಡಿರುವ ಇವರು ಮುಂದೆ ಅನೇಕ ಗಿಡಗಳ ತಳಿಯನ್ನು ಮಾಡುವ ಅಲೋಚನೆ ಇಟ್ಟಿಕೊಂಡಿದ್ದಾರೆ.ಇದೇ ಮಾದರಿಯಲ್ಲಿ ಅಗಸೆ ಗಿಡವನ್ನು ಬೆಳೆಯುವ ಹಂಬಲ ಇಟ್ಟುಕೊಂಡಿರುವ ಬಸವರಾಜು ಅವರಿಗೆ ನಾವೆಲ್ಲ ಒಂದು ಬೆಸ್ಟ್ ಆಫ್ ಲಕ್ ಹೇಳೋಣ. 

            *

ಗೋಮೂತ್ರದ ಕ್ರಮ

  ನೂರು ಲೀಟರ್ ನೀರಿಗೆ ಹತ್ತು ಲೀಟರ್ ಗೋಮೂತ್ರವನ್ನು ಹಾಕಬೇಕು. ನಂತರ ಉಳಿ ಮಜ್ಜಿಗೆಯನ್ನು ಎರಡು ಲೀಟರ್ ಹಾಕಿ ಚನ್ನಾಗಿ ಮಿಶ್ರಣ ಮಾಡಬೇಕು. ಮಿಶ್ರಣ ಮಾಡಿದ ಮೇಲೆ ಗಿಡಗಳಿಗೆ ಡೀಪ್ ಮೂಲಕ ಹಾಯಿಸಬೇಕು. ಗೋಮೂತ್ರದಲ್ಲಿ ರೋಗ ನಿರೋಧಕ ಶಕ್ತಿ ಇರುವುದರಿಂದ ಗಿಡಗಳು ಚನ್ನಾಗಿ ಬೆಳೆಯುತ್ತದೆ. ಮಾತ್ರವಲ್ಲ ಹೆಚ್ಚಿನ ಇಳುವರಿಯನ್ನು ಕೊಡುತ್ತದೆ. ಒಂದು ಎಕರೆಗೆ ಸುಮಾರು ಐನೂರು ಲೀಟರ್ ನೀರು ಗಿಡಗಳಿಗೆ ಬೇಕಾಗುತ್ತದೆ. 


                                                         ಗೋಮೂತ್ರದ ತೊಟ್ಟಿ

                                                                       *

                                          


                                     ಗೋಮೂತ್ರವನ್ನು ಜಲ್ಲಿ ಮರಳು ಸೋಸುತ್ತಿರುವುದು

                                                                   *

                                    ಬಸವರಾಜು ಅವರ phono no;-99169-84926

        




1 comment:

ಬೂತ್ ಮಟ್ಟದಲ್ಲಿ ಸಂಘಟನೆಗೆ ಕಾಂಗ್ರೇಸ್ ಗಾಂಧಿ ನಡೆ

ಸೋಲದೇವನಹಳ್ಳಿ ಗ್ರಾಮದಲ್ಲಿ ನಡೆದ ಗಾಂಧಿ ನಡೆ ಕಾರ್ಯಗಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಾತನಾಡಿದರು. ಹಿರಿಯ ಮುಖಂಡರಾದ ವೀರಪ್ಪಮೊ...